Tuesday, June 23, 2009

ಬೆಟ್ಟದ ಜೀವ

ಶಿವರಾಮ ಕಾರಂತರ ಬೆಟ್ಟದ ಜೀವ ಓದುವ ಅವಕಾಶ ಕೆಲವು ದಿನಗಳ ಹಿಂದೆ ಒದಗಿತು. ಇದೇ ಮೊದಲ ಬಾರಿಗೆ ಕಾರಂತರ ಕೃತಿ ಓದಿದ್ದು. ಓದುತ್ತಿದ್ದಂತೆಯೇ ಊರಿನ ನೆನಪು ಉಮ್ಮಳಿಸಿ ಬಂತು. ಎಷ್ಟು ಚೆನ್ನಾಗಿ ಸುಳ್ಯ, ಪಂಜ ಸೀಮೆಯ ಬಗ್ಗೆ ವರ್ಣಿಸಿ ಬರೆದಿದ್ದಾರೆಂದರೆ ಮರಳಿ ಮಣ್ಣಿಗೆ ಹೋಗಿಬಿಡುವ ಆಸೆಯಾಯಿತು. ಮಧ್ಯೆ ವಿಟ್ಲ, ಪುತ್ತೂರು ಸೀಮೆಯ ಬಗ್ಗೆಯೂ ಉಲ್ಲೇಖಿಸಿದ್ದು ಓದಿ ಸಂತೋಷವಾಯಿತು. ಗುತ್ತಿಗಾರು ಬೆಳ್ಳಾರೆಯ ನಡುವೆ ಹಾದಿ ತಪ್ಪಿ ಗೋಪಾಲ ಭಟ್ಟರ ಮನೆ ತಲುಪುವ ಲೇಖಕ ಶಿವರಾಮ, ಭಟ್ಟರು ಹಾಗೂ ಮಡದಿ ಶಂಕರಿಯ ಆತಿಥ್ಯಕ್ಕೆ ಮನಸೋತು ಅವರ ಪ್ರೀತಿಯ ಕೋರಿಕೆಯ ಮೇಲೆ ಕೆಲವು ದಿನಗಳನ್ನು ಅಲ್ಲೇ ಕಳೆಯುತ್ತಾನೆ. ಅಲ್ಲಿನ ಅವರ ದೈನಂದಿನ ಜೀವನ, ಏಕತಾನತೆ, ಕೃಷಿಕ ಜೀವನ, ಕಾಡಿನ ಮಧ್ಯದ ಬದುಕಿನ ಹಲವು ಮುಖಗಳನ್ನು ಲೇಖಕ ಕೆಲವೇ ದಿನಗಳಲ್ಲಿ ಕಾಣುತ್ತಾನೆ. ತಾಯಿ ಶಂಕರಿ ಮನೆ ಬಿಟ್ಟು ಹೋದ ಮಗನಿಗಾಗಿ ಹಾತೊರೆಯುವುದು, ಭಟ್ಟರು ದುಃಖವನ್ನು ಮರೆಯಲು ಕೆಲಸಗಳಲ್ಲಿ ತೊಡಗುವುದು, ಸಾಕು ಮಗ ನಾರಾಯಣ ಅವನ ಹೆಂಡತಿಯ ತೊಳಲಾಟ, ಆದರೂ ಕಾಡಿನಲ್ಲಿ ನಾಡು ಕಟ್ಟಿ ಅದರಲ್ಲಿ ತಮ್ಮ ಜೀವನದ ಸಾರ್ಥಕತೆ ಕಾಣುವುದು ಎಲ್ಲವೂ ಮನಸ್ಸಿನಲ್ಲಿ ಬೆಚ್ಚಗೆ ಕುಳಿತು ಬಿಟ್ಟವು.

ಕಾರಂತರ ಬರವಣಿಗೆ ಎಷ್ಟು ಸುಲಲಿತವೋ, ಅವರು ಬರೆದಿರುವುದು ಅಷ್ಟೇ ಸತ್ಯ. ನನಗೆ ಆಶ್ಚರ್ಯವನ್ನುಂಟು ಮಾಡಿದ ಸಂಗತಿ ಎಂದರೆ ಇತ್ತೀಚಿಗೆ ಚರ್ಚೆಗೆ ಬಂದಂತಹ ವಿಷಯಗಳನ್ನೆಲ್ಲ ಆಗಿನ ಕಾಲದಲ್ಲೇ ಅವರು ಬರೆದಿದ್ದುದು. ಪೂರ್ವಿಕರ ಕಾಲದಿಂದ ಬಂದಂತಹ ಆಸ್ತಿಯಲ್ಲಿ ಅಡಿಕೆ, ತೆಂಗು, ಬಾಳೆ, ಭತ್ತ ಬೆಳೆಯುವುದು ನಮ್ಮಲ್ಲಿ ಈವರೆಗೂ ನಡೆದುಕೊಂಡು ಬಂದಿದೆ. ಆದರೆ ಮಕ್ಕಳು ವಿದ್ಯಾವಂತರಾಗುತ್ತಿದ್ದಂತೆ ಊರು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುವುದು, ಕೆಲಸಕ್ಕೆ ಆಳುಗಳು ಸಿಗದಿರುವುದು, ಬಂದ ಘಟ್ಟದ ಮೇಲಿನ ಜನ ಮಧ್ಯದಲ್ಲಿ ಬಿಟ್ಟು ಹೋಗುವುದು, ಇವೆಲ್ಲ ದೇಶದ ಬೆನ್ನೆಲುಬು ಅನಿಸಿಕೊಳ್ಳುವ ರೈತರಿಗೆ ಎಲ್ಲಿಲ್ಲದ ತೊಂದರೆಯನ್ನುಂಟು ಮಾಡಿವೆ. ಗೋಪಾಲ ಭಟ್ಟರು ಮಗನಿಗೆ ಇಂಗ್ಲೀಷ್ ಕಲಿಸಿದ್ದೆ ತಮಗೆ ಮುಳುವಾಯಿತೇ ಎಂದು ಚಿಂತಿಸಿದಾಗ ನಾನೂ ಮಾಡಿದ್ದು ಅದೇ ಅಲ್ಲವೇ ಎಂಬ ಅಪರಾಧಿ ಭಾವ ಬಂದಿದ್ದು ನಿಜ.

ಭಟ್ಟರು ಕಾಟುಮೂಲೆಯಲ್ಲಿ ಕಾಡು ಕಡಿದು ತೋಟ ಮಾಡಿದ ಸಾಹಸ, ಚಿಕ್ಕಂದಿನಲ್ಲಿ ನಾವು ಮಕ್ಕಳು ಬೇಸಿಗೆ ರಜೆಯಲ್ಲಿ ಕಾಟುಮೂಲೆಗೆ ಹೋಗಿ ಲಾಗ ಹಾಕಿ, ಮಾವಿನ ಕಾಯಿ/ಹಣ್ಣು ತಿಂದು ಊಟ ಬೇಡ ಅನ್ನುತ್ತಿದ್ದುದನ್ನು ನೆನಪಿಗೆ ತಂದಿತು. ಗುಡ್ಡ ಹತ್ತಲು ಸುಲಭ ದಾರಿ ಇದ್ದರೂ ಸಾಹಸ ಎಂಬ ಹುಂಬ ಧೈರ್ಯದಲ್ಲಿ ಎಲ್ಲೆಲ್ಲೋ ಹೋಗಿ ಜಾರಿ, ಬಿದ್ದು, ಎದ್ದು, ದಿನವೆಲ್ಲ ಕಾಡು ಸುತ್ತಿದ ನೆನಪು ಇನ್ನೂ ಹಸಿಯಾಗಿ ಉಳಿದಿದೆ. ದೇರಣ್ಣ ಗೌಡನು 'ಮಂಗಗಳ ಕಾಟ ಅತಿಯಾಗಿದೆ, ಈ ಬ್ರಾಹ್ಮಣರು ಮಂಗಗಳನ್ನು ಹೊಡೆಯಲೂ ಹಿಂದೆ ಮುಂದೆ ನೋಡುತ್ತಾರೆ' ಎಂದಿದ್ದು, ನನ್ನ ಅಜ್ಜ ಮನೆಯಲ್ಲಿದ್ದ ಕೋವಿಗೆ ಗುಂಡು ಹಾಕಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದದು ನೆನಪಾಯಿತು. ಭೂತದ ಕೋಲ ಮಾಡಿಸಬೇಕು ಅಯ್ಯ ಎಂದು ಬಟ್ಯ, ಅದಕ್ಕೆ ಖರ್ಚಿಗೆ ಹಣ ಎಲ್ಲಿಂದ ತರಲಿ ಎನ್ನುವ ದೇರಣ್ಣ ಗೌಡ, ನೀವು ಹಣ್ಣು ಕಾಯಿ ಕೊಡಿ ಎಂದು ಭಟ್ಟರು ಎಂದಿದಕ್ಕೆ, ಬಟ್ಯನ 'ನೀವು ಜಪ ತಪ ಮಾಡಿ ವಿಭೂತಿ ಹಚ್ಚುತ್ತೀರಿ, ನಾನು ಕೋಳಿಯ ಬದಲು ತೆಂಗಿನ ಕಾಯಿ ಕೊಟ್ಟರೆ ಕಲ್ಕುಡ ನನ್ನ ರುಂಡವನ್ನೇ ಹಾರಿಸೀತು' ಎಂಬ ಉತ್ತರ ತಮಾಷೆ ಎನಿಸಿತು.

ತೋಟ,ಗದ್ದೆ, ಗುಡ್ಡ, ಅದರ ಪಕ್ಕದಲ್ಲೇ ಹರಿಯುವ ನದಿ, ನದಿಯ ನಂತರ ಕಳನ್ಜಿಮಲೆ ಕಾಡು. ಕಾರಂತರು ಮಾವೆಗೆ ಬಂದಿದ್ದರೂ ಇದೇ ರೀತಿ ಬರೆಯುತ್ತಿದ್ದಾರೋ ಏನೋ... ಅಥವಾ ನಮ್ಮ ಸುಳ್ಯ, ಪುತ್ತೂರು,ವಿಟ್ಲ ಸೀಮೆಯಲ್ಲಿ ಇಂಥ ಎಷ್ಟು ಗೋಪಾಲ ಭಟ್ಟರೂ, ಅವರ ಕಥೆಗಳೂ ಕಳೆದು ಹೋಗಿವೆಯೋ ಏನೋ... ಗೋಪಾಲ ಭಟ್ಟರು ಶ್ರಮ ಜೀವಿಯಾಗಿ, ಹಟ ಕಟ್ಟಿ ಸಾಹಸಗಳನ್ನು ಮಾಡುತ್ತಾ, ಮಗನ ಬಗ್ಗೆ ನೊಂದಿದ್ದರೂ ತಾತ್ವಿಕರಂತೆ ಮಾತಾಡಿ ತನಗೆ ತಾನೇ ಸಾಂತ್ವನ ಹೇಳುವ ಪರಿ, ನಾರಾಯಣನ ಜೀವನಕ್ಕೆ ದಾರಿ ಮಾಡಿಕೊಟ್ಟು ಅದರಲ್ಲೇ ಸಂತೋಷ ಕಾಣುವ ತ್ಯಾಗಮಯಿ ಜೀವ, ತನ್ನ ಅರ್ಧಾಂಗಿ ಶಂಕರಿಯ ಮೇಲಿನ ಪ್ರೀತಿ, ಮಮಕಾರ - ಇವುಗಳು ಮನದಾಳಕ್ಕೆ ಇಳಿದು ಉಳಿದು ಬಿಟ್ಟವು.

9 comments:

Raveesh Kumar said...

karanthara kaadambarigaLalli dakshina kannadada parisara, janajeevana chennagi moodi bandirutte. mookajjiya kanasugaLu, aLida mele, iddaru chinte odidaagalu ide anubhavaagittu.

Supreetha said...

ಹೌದು. ಇವನ್ನೆಲ್ಲ ಓದ್ಬೇಕು.. ಟೈಮ್ ಸಿಕ್ಬೇಕು, ಅಷ್ಟೇ!

SANTHOSH SOMPURA said...

tumba chennagide review....Karantara maraLi maNNIge kooda ide tarahada kadambari...

Prashanth said...

After reading your review, I went nostalgic about my good old summer holidays @ my grandpa's place. I'm searching for a time machine to rewind the time!
I'm desperate to read this book now. :-)

Unknown said...

blog ge nalli kannada oode yestu dewas gali hogithu...aanthu swalpa, nidaanawagi oodide.. kannada dali baredidu oondu noodi tumba santosh wayitu..

baraha nodidare..ondu olliya lekhaki aaguwa samarthya ulluwaware e-reti baryabuhudu..
nanuu eddnu ode..manku timma thara..adde..

kannada vishisahte ..kadinalli nadu katti aadrali awara jeewana sagisedahte..one software padhawe dere aage..eesthu chanagi kannada baredidu..one aachraykara

a rethiya pawadgu aguwdu sahajawalla..

Supreetha said...

ಪ್ರಶಾಂತ್, ನನ್ನ ಬರಹ ನಿಮ್ಮನ್ನು ಕನ್ನಡ ಕಾದಂಬರಿ ಓದುವಂತೆ ಪ್ರೇರೇಪಿಸಿದರೆ ನಾನು ಬರೆದದ್ದು ಸಾರ್ಥಕ. ಖಂಡಿತ ಓದಿ..

vishnu said...

ನಿಮ್ಮ ಹಿಂದಿನ ಬರಹಗಳಿಗೆ ಹೋಲಿಸಿದರೇ ನಿಮ್ಮ ಕನ್ನಡ ಲೇಖನ ಹಂತ ಹಂತವಾಗಿ ಒಂದು ಉತ್ತಮ ಹಂತ ತಲುಪಿದೆ..
ಒಬ್ಬ ಕಾದಂಬರಿಕಾರ ತನ್ನ ಕಥೆಯನ್ನು ಕಾದಂಬರಿ ಮೂಲಕ ಹೇಳಿದರೆ...ಒಬ್ಬ ಓದುಗ ಕಾದಂಬರಿಯಲ್ಲಿ ತನ್ನ ಕಥೆಯನ್ನು ಹುಡುಕುತಾನೆ..ಅ ಹುಡುಕಾಟ ನಿಜವಾದಾಗ ಕಾದಂಬರಿ ಮನಸಿಗೆ ಹತ್ತಿರವಾಗುತ್ತೆ.... ನಿಮ್ಮ ಹುಡುಕಾಟ ಈ ಬರಹದಲ್ಲಿ ಎದ್ದು ಕಾಣುತಿದೆ...

Pransss said...

i am really thrilled to see a writing in kannada. I still remember u were always getting first place in essay writing in ur 6th- 7th std, and u carried this writing hobby.Hope i see your writings in newspapers, magazines etc. and it would surely impact youth.All the best..

Smitha Mave said...

ಕಾರಂತರು ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅವರು ತೊಡಗಿಕೊಳ್ಳದ ಕಲಾ ಪ್ರಕಾರಗಳಿಲ್ಲ ಅಂದರೆ ತಪ್ಪಾಗದು. ಅವರ ಯಕ್ಷಗಾನ ಪ್ರಯೋಗಗಳು, ಚೋಮನ ದುಡಿ ಮೂಲಕ ಚಿತ್ರರಂಗಕ್ಕೆ ನೀಡಿದ ಕೊಡುಗೆ, ಬಾಲವನದಲ್ಲಿ ಪರಿಸರ ಮತ್ತು ಶಿಕ್ಷಣ ರಂಗದಲ್ಲಿನ ಪ್ರಯೊಗಗಳು, ತರಂಗದಲ್ಲಿ ಬರೆಯುತ್ತಿದ್ದ "ಬಾಲವನದಲ್ಲಿ ಕಾರಂತಜ್ಜ" ಅಂಕಣ- ಒಂದೇ, ಎರಡೇ? 20ನೆಯ ಶತಮಾನ ಕಂಡ ಬಹುಮುಖ ವ್ಯಕಿತ್ವ, ಅಗಾಧ ಪ್ರತಿಭೆಯುಳ್ಳ ವಿಶಿಷ್ಟ ವ್ಯಕ್ತಿ ಕಾರಂತರು. ಎಲ್ಲಕ್ಕಿಂತಲೂ ಹೆಚ್ಚು, ಅನಿಸಿದ್ದನ್ನು ಮುಲಾಗಿಲ್ಲದೇ ಹೇಳುವ ನೇರ ನಡೆ-ನುಡಿಯುಳ್ಳ ಈ ದಿಟ್ಟ ಬರಹಗಾರ ನನ್ನ ಅತಿಮೆಚ್ಚಿನ ಲೇಖಕರು. ಅವರ ಕೃತಿಯ ಬಗ್ಗೆ ಬರೆದು ತಮ್ಮ ಬ್ಲಾಗ್ನ ಶೋಭೆಯನ್ನು ಹೆಚ್ಚಿಸಿದ್ದೀರಿ ನೀವು.